ಪದಾರ್ಥ -
ನಾಮನಿರ್ದೇಶನಕ್ಕಾಗಿ ಬಳಸುವ ಪದ ಸೂಚಿಸುವ ವಸ್ತು. ಆ ವಸ್ತು ಆ ಪದಕ್ಕೆ ಅರ್ಥ. ಆದ್ದರಿಂದ ಪದಾರ್ಥವೆಂದರೆ ಶಬ್ದ ತೋರಿಸಬಲ್ಲ ವಸ್ತುವೆಂದು ಹೇಳಬಹುದು.

	ಹಾಗಾದರೆ ಶಬ್ದ ಪದಾರ್ಥವಾಗಬಾರದೇ ಎಂಬ ಶಂಕೆ ಮೂಡಬಹುದು. ಪದಾರ್ಥವಾಗಲಾರದ ವಸ್ತು ಯಾವುದೂ ಇರದೂಡದು, ಇರಲಾಗದು, ಇಲ್ಲವೂ ಇಲ್ಲ. ಈ ಭಾವನೆಯಲ್ಲಿ ಪದ ಎಂಬ ಶಬ್ದಕ್ಕೆ ಜ್ಞಾನವೆಂದು ಅರ್ಥ ಕಲ್ಪಿಸಲಾಗಿದೆ. ಜ್ಞಾನಕ್ಕೆ ಗೋಚರವಾಗದ ವಸ್ತು ಬಂಜೆಯ ಮಗನಂತೆ ಅಸಂಭಾವಿತ. ಆದುದರಿಂದ ಪದವೂ ಪದಾರ್ಥ ವರ್ಗದಲ್ಲಿ ಸೇರಿಕೊಳ್ಳುತ್ತದೆ.

	ಜಗತ್ತಿನಲ್ಲಿ ಪ್ರಯೋಜನಕ್ಕೆ ಸಂಬಂಧಪಡದಿರುವ ವಸ್ತು ಯಾವುದೂ ಇಲ್ಲ. ಪ್ರಯೋಜನಕ್ಕೆ ಮೂಲ ಆಸೆ ; ಅದರ ಫಲ ಶಾಂತಿ. ಒಂದಲ್ಲ ಒಂದು ರೀತಿಯಲ್ಲಿ ಎಲ್ಲ ವಿಧವಾದ ವಸ್ತುವೂ ಬಳಕೆಗೆ ಬೇಕಾಗುತ್ತದೆ. ಆದಕಾರಣ ಫಲಸಿದ್ಧಿಗಾಗಿ ಒದಗುವ ವಸ್ತು ಪದಾರ್ಥವೆನಿಸಿಕೊಳ್ಳುತ್ತದೆ.

	ಅಂತೆಯೇ ನಿಜವಾದ ಜ್ಞಾನಕ್ಕೆ ವಿಷಯವಾಗಿರತಕ್ಕದ್ದು ಪದಾರ್ಥದ ಲಕ್ಷಣ. ಭ್ರಾಂತಿಗೆ ಗೋಚರವಾದ ವಸ್ತು ಭ್ರಾಂತಿ ಕಳೆದ ಅನಂತರ ಇರುವುದಿಲ್ಲ. ಅದು ಕೇವಲ ತಾತ್ಕಾಲಿಕವಾದುದು. ನಿಜವಾಗಿಯೂ ಅದರಿಂದ ಯಾವ ಪ್ರಯೋಜನವನ್ನೂ ಪಡೆಯಲಾಗುವುದಿಲ್ಲ.

	ಒಟ್ಟಿನಲ್ಲಿ ಪದಾರ್ಥವೆಂದರೆ ಅಭಿಧಾನ-ನಾಮನಿರ್ದೇಶಕ್ಕೆ, ಜ್ಞಾನಕ್ಕೆ, ಪ್ರಯೋಜನಕ್ಕೆ ಮತ್ತು ಪ್ರಾಮಾಣಿಕವಾದ ಜ್ಞಾನಕ್ಕೆ ಸಂಬಂಧಪಡುವ ವಸ್ತು.

	ಮೇಲೆ ಹೇಳಿದ ಲಕ್ಷಣಗಳುಳ್ಳ ಪದಾರ್ಥ ಯಾವ ರೀತಿಯದಾಗಿರಬಹುದು ಎಂಬ ಪ್ರಶ್ನೆಗೆ ಉತ್ತರವಾಗಿ ಪದಾರ್ಥದ ಸ್ವಭಾವಕ್ಕೆ ಹೊಂದಿಕೊಳ್ಳುವಂತೆ ವಿಭಾಗಿಸಲಾಗಿದೆ. ತತ್ತ್ವಜ್ಞಾನ ಯಥಾರ್ಥ ಜ್ಞಾನ ಅಥವಾ ಪ್ರಾಮಾಣಿಕ ಜ್ಞಾನ ಎಂದು ಹೇಳಬಹುದಾದ ಜ್ಞಾನಕ್ಕೆ ವಿಷಯ ಸೇರಿಕೊಂಡಿರುವ ವಸ್ತು ಪದಾರ್ಥ. ಅದು ಇಬ್ಬಗೆಯಾಗಿರಬಹುದು. ಒಂದು, ಭಾವರೂಪ. ಇನ್ನೊಂದು, ಅಭಾವ ರೂಪ. ಚಂದ್ರ ಕಾಣುತ್ತಾನೆ ಎಂಬ ಉದಾಹರಣೆಯಲ್ಲಿ ನಮ್ಮ ಜ್ಞಾನಕ್ಕೆ ಕಣ್ಣಿನ ಮೂಲಕವಾಗಿ ಸಂಬಂಧಪಟ್ಟಿದ್ದ ಚಂದ್ರನೆಂಬ ಪದಾರ್ಥ. ಅದು ಭಾವರೂಪ. ನಿಜವಾಗಿಯೂ ಇರುವ ಚಂದ್ರನಿಗೂ ಜ್ಞಾನಕ್ಕೆ ಸಾಮಗ್ರಿಯಾದ ಕಣ್ಣಿಗೂ ನೇರವಾದ ಸಂಬಂಧವೇರ್ಪಟ್ಟಿದೆ. ಚಂದ್ರನನ್ನು ವಿಷಯೀಕರಿಸುವ ಜ್ಞಾನದಲ್ಲಿ ಚಂದ್ರನಲ್ಲದ ಮತ್ತಾವ ವಿಶೇಷ್ಯ ವಸ್ತುವೂ ತೋರದ ಕಾರಣ, ವಿಷಯವಾಗಿ ಸೇರಿಕೊಂಡಿರುವ ವಸ್ತು ಚಂದ್ರನಾದುದರಿಂದ ಚಂದ್ರಜ್ಞಾನದಲ್ಲಿ ವಿಷಯವಾದುದು ಭಾವಪದಾರ್ಥ.

	ಹಗಲಿನಲ್ಲಿ ಆಕಾಶದತ್ತ ನೋಡುವಾಗ ಚಂದ್ರ ಕಾಣಿಸಿಕೊಳ್ಳುವುದಿಲ್ಲ. ಆಗ ಚಂದ್ರ ಜ್ಞಾನಗೋಚರನೇ ಎಂದು ಕೇಳಿದರೆ ಇಲ್ಲವೆನ್ನಲೇಬೇಕು. ಚಂದ್ರನಿಗೂ ಜ್ಞಾನಸಾಮಗ್ರಿಯಾದ ಕಣ್ಣಿಗೂ ಇದ್ದಿರಬೇಕಾದ ನೇರವಾದ ಸಂಬಂಧ ಕಡಿದು ಹೋಗಿದೆ. ಆದ ಕಾರಣ ಚಂದ್ರ ಇಲ್ಲದ, ಅಂದರೆ ಗೋಚರವಾಗದ ಪದಾರ್ಥ ಎಂದು ಆಗುತ್ತದೆ. ಜ್ಞಾನಕ್ಕೆ ಪ್ರಕೃತ ಅಪೇಕ್ಷಿತವಾದ ವಿಷಯ ಚಂದ್ರ. ಅದಕ್ಕೆ ಬೇಕಾದುದು ನೇರವಾದ ಸಂಬಂಧ. ಆ ಸಂಬಂಧ ಇಲ್ಲದಿರುವುದರಿಂದ ಜ್ಞಾನಕ್ಕೆ ಚಂದ್ರನೆಂಬ ಪದಾರ್ಥ ಗೋಚರವಾಗುವುದಿಲ್ಲ.

	ಹಾಗಾದರೆ ಚಂದ್ರನನ್ನು ವಿಷಯೀಕರಿಸುವ ಪ್ರಸಂಗದಲ್ಲಿ ಚಂದ್ರಪದಾರ್ಥವಿಲ್ಲದಿದ್ದರೆ ಅಲ್ಲಿ ತೋರುವ ವಸ್ತು ಯಾವುದಾಗಬಹುದು ಎಂದರೆ ಚಂದ್ರನಿಲ್ಲ ಎಂಬ ವಿಷಯ ಎಂದು ಹೇಳಬೇಕಾಗುತ್ತದೆ. ಚಂದ್ರನಿಗೆ ಸಂಬಂಧಪಟ್ಟ ಉಂಟು ಅಥವಾ ಇಲ್ಲ ಎಂಬ ಅವಸ್ಥೆಗಳು ಎರಡು. ಅವುಗಳು ಪರಸ್ಪರ ವಿರುದ್ಧವಾದುವು. ಎರಡೂ ಒಟ್ಟುಗೂಡಿ ಇರಲಾರವು. ಉಂಟು ಎಂಬ ಅವಸ್ಥೆಯೊಡನೆ ತೋರುವ ಚಂದ್ರನೂ ಎಲ್ಲ ಎಂಬ ಅವಸ್ಥೆಯೊಡನೆ ತೋರುವ ಚಂದ್ರನೂ ಸರ್ವಥಾ ಒಂದೇ ಅಲ್ಲ. ಆದುದರಿಂದ ಇಲ್ಲ ಎಂಬ ಅವಸ್ಥೆಯೊಡನೆ ಸಂಬಂಧ ಹೊಂದಿದರೆ ಚಂದ್ರ ಪದಾರ್ಥ ಅಭಾವ ವರ್ಗಕ್ಕೆ ಸೇರುತ್ತದೆ.

	ಈ ರೀತಿಯ ಭಾವ ಮತ್ತು ಅಭಾವ ಎಂಬ ವಿಂಗಡಣೆಗೆ ಆ ಜ್ಞಾನಕ್ಕೂ ವಿಷಯಕ್ಕೂ ಇರುವ ಸಂಬಂಧವೇ ಕಾರಣ. ಇರುವಿಕೆ ಎಂಬ ತೋರ್ಕೆ ಯಾವ ಜ್ಞಾನಕ್ಕೆ ಸಂಬಂಧಪಡುತ್ತದೆಯೋ ಅದೇ ಜ್ಞಾನಕ್ಕೆ ಚಂದರನೂ ಸಂಬಂಧಪಡುತ್ತಾನೆ. ಆದರೆ ಇಲ್ಲ ಎಂಬ ತೋರ್ಕೆಯಲ್ಲಿ ಪರಿಸ್ಥಿತಿಯೇ ಬೇರೆ. ಇಲ್ಲ ಎಂಬ ಪದಾರ್ಥ ಇದೆ ಎಂಬ ಪದಾರ್ಥದಂತೆ ಸ್ವತಂತ್ರವಲ್ಲ. ಅದು ಸಾಪೇಕ್ಷ ಪದಾರ್ಥ. ಇದೆ ಎಂಬ ಪದಾರ್ಥವನ್ನು ಅಳಿಸುವ ಪ್ರಭಾವ ಬೀರುವ ಆದೇಶ ಪದಾರ್ಥ ಆದುದರಿಂದ ಚಂದ್ರ ಪದಾರ್ಥಕ್ಕೆ ಸಂಬಂಧಪಟ್ಟ ಸಹಜವಾದ ಇರುವಿಕೆ ಎಂಬ ಭಾವತ್ವಕ್ಕೆ ಪ್ರತಿಯಾಗಿ ಚಂದ್ರ ಇಲ್ಲ ಎನ್ನುವ ಅಭಾವತ್ವ ಭಾವತ್ವ ನಿರಾಸಕ ವೃತ್ತಿಯುಳ್ಳದಾದುರಿಂದ ಅಭಾವ ಜ್ಞಾನದಲ್ಲಿ ಚಂದ್ರನ ವಿಷಯಕ್ಕೆ ಏರ್ಪಡುವ ಸಂಬಂಧ ವ್ಯತ್ಯಾಸ ಭಾವ ಮತ್ತು ಅಭಾವ ಎಂಬ ವಿಭಜನೆಗೆ ಕಾರಣವಾಗುತ್ತದೆ.

	ಭಾವ ಮತ್ತು ಅಭಾವ ಎಂಬ ವಿಭಜನೆಗೆ ಒಳಗಾದ ಪದಾರ್ಥ ವಿಮರ್ಶೆಯ ದೃಷ್ಟಿಯಿಂದ ಮತ್ತೊಂದು ರೀತಿಯಲ್ಲಿ ವಿಭಜನೆಗೆ ಒಳಗಾಗುತ್ತದೆ. ಈ ವಿಭಜನೆಯನ್ನು ದ್ರವ್ಯ ಮತ್ತು ದ್ರವ್ಯವಲ್ಲದುದು ಎಂದು ಬಗೆಯಬಹುದು. ಪದಾರ್ಥಗಳು ಎಲ್ಲ ಏಕರೀತಿಯವಲ್ಲ. ಕೆಲವು ಆಶ್ರಯನೀಡುವ ಸ್ವಭಾವದಿಂದ ಕೂಡಿದವು. ಮತ್ತೆ ಕೆಲವು ಆಶ್ರಯವನ್ನು ಪಡೆವ ಸ್ವಭಾವವುಳ್ಳವು. ಆಶ್ರಯ ನೀಡುವ ವಸ್ತು ಆಧಾರವಾಗುತ್ತದೆ. ಆಶ್ರಯ ಪಡೆದ ವಸ್ತು ಆಧೇಯವಾಗುತ್ತದೆ. ಹೀಗೆ ಆಶ್ರಯ-ಆಶ್ರಯಿ (ಆಧೇಯ) ವಸ್ತುಗಳು ಪರಸ್ಪರ ಸಾಪೇಕ್ಷ ಪದಾರ್ಥಗಳಾದರೂ ಒಂದು ಅಂಶದಲ್ಲಿ ವಿಶೇಷವುಂಟು. ಆಶ್ರಯ ಬೇಡುವ ಪದಾರ್ಥವಿಲ್ಲದಿದ್ದರೂ ಆಶ್ರಯ ನೀಡುವ ಪದಾರ್ಥದ ಇರುವಿಕೆಗೆ ಚ್ಯುತಿಯಿಲ್ಲ. ಆದರೆ ಆಶ್ರಯ ಪಡೆಯದೆ ಸ್ವತಂತ್ರವಾಗಿ ಇರಬಲ್ಲ ಆಧೇಯ ಪದಾರ್ಥ ತನ್ನ ಸ್ವರೂಪವನ್ನೇ ಕಳೆದುಕೊಳ್ಳುತ್ತದೆ. ಪದಾರ್ಥದಲ್ಲಿ ಅನೇಕ ಅಂಶಗಳು ಒಟ್ಟಾಗಿ ಸೇರಿಕೊಂಡಿದ್ದರೂ ಸೇರಿಕೊಂಡಿರುವ ಪದಾರ್ಥಗಳ ಪರಸ್ಪರ ಪ್ರತ್ಯೇಕವಾದ ರೂಪಗಳು ಎಂದಿಗೂ ಮಾರ್ಪಡುವುದಿಲ್ಲ.

	ಮೇಲೆ ನಿರೂಪಿಸಿದ ರೀತಿಯಲ್ಲಿ ಆಶ್ರಯವನ್ನು ಅಪೇಕ್ಷಿಸುವ ಪದಾರ್ಥಗಳನ್ನು ಸ್ಥೂಲವಾಗಿ ಗುಣ ಮತ್ತು ಕರ್ಮ ಎಂದು ವಿಭಾಗ ಮಾಡಬಹುದು. ದ್ರವ್ಯದಲ್ಲಿ ಸೇರಿಕೊಳ್ಳುವುದು ಯಾವುದಾದರೂ ಅದು ಧರ್ಮವೆನಿಸಿಕೊಳ್ಳುತ್ತದೆ. ಆ ಧರ್ಮದಲ್ಲಿ ಅಡಗಿರುವ ಒಂದು ವರ್ಗವನ್ನು ಗುಣವೆಂದು ಪರಿಗಣಿಸುವುದು ಪದ್ಧತಿ. ಧರ್ಮಿ ಧರ್ಮ ಎಂದು ತೋರುವ ವಿಭಾಗ ದ್ರವ್ಯ ಗುಣ ಮತ್ತು ಕರ್ಮ ಎಂಬ ಪಂಗಡದಲ್ಲೂ ಸೇರಬಹುದು. ಗುಣವೆಂದರೆ ದ್ರವ್ಯದಲ್ಲಿದ್ದಕೊಂಡು ಅದಕ್ಕೆ ಬೇಕಾಗಿರುವ ನಿಲುವನ್ನು ಉಳಿಸಿಕೊಡುವ ಅಥವಾ ಅದಕ್ಕೆ ಬೇಡವಾದುದನ್ನು ತಡೆವ ಧರ್ಮ ಕರ್ಮವೆಂಬುದು ಗುಣಪ್ರವರ್ತಿತವಾದ ಧರ್ಮ. ಇಷ್ಟಾನಿಷ್ಟರೂಪವಾದ ಪ್ರಾಪ್ತಿ ಪರಿಹಾರ ವೇಳೆಗಳಲ್ಲಿ ನಮ್ಮ ಬಯಕೆಯನ್ನು ಈಡೇರಿಸಿಕೊಳ್ಳಬಲ್ಲ ಪದಾರ್ಥ. ಹೀಗೆ ಅನುಭವದಲ್ಲಿ ಬಳಸುವ ವಸ್ತುಗಳನ್ನು ದ್ರವ್ಯ, ಗುಣ ಮತ್ತು ಕರ್ಮ ಎಂದು ಮೂರು ವಿಧವಾಗಿ ಕಾಣಬಹುದು.

	ಮೇಲೆ ಹೇಳಿದ ಮೂರು ಪದಾರ್ಥಗಳನ್ನು ಸಂಖ್ಯೆಯ ಅಥವಾ ವ್ಯಕ್ತಿಯ ದೃಷ್ಟಿಯಲ್ಲಿ ನಿರೂಪಣೆ ಮಾಡುವ ಕ್ರಮವೂ ಅವಶ್ಯಕ. ಕಾಲ ಮತ್ತು ಪ್ರದೇಶ ಸಂಪರ್ಕದ ಪರಿಣಾಮವಾಗಿ ಒಂದರಂತೆ ಮತ್ತೊಂದು ಎಂಬ ರೀತಿಯಲ್ಲಿ ಅಸಂಖ್ಯಾತ ವಸ್ತುಗಳು ಇರಬೇಕಾಗುತ್ತದೆ. ಅವುಗಳನ್ನೆಲ್ಲ ಪ್ರತಿಯೊಂದು ವ್ಯಕ್ತಿಯನ್ನೂ ಬಿಡದೆ ಗ್ರಹಿಸುವುದು ಅಸಾಧ್ಯ. ಆದರೆ ಸಮಸ್ತ ವ್ಯಕ್ತಿಗ್ರಹಣಕ್ಕೆ ಸುಲಭವಾದ ಮಾರ್ಗವುಂಟು. ಪರಸ್ಪರ ಸಾಮ್ಯ ವೈಷವ್ಯಗಳು ಪ್ರತಿವ್ಯಕ್ತಿಯಲ್ಲಿಯೂ ತೋರುತ್ತವೆ. ವ್ಯಕ್ತಿಗಳಲ್ಲಿ ನಿಯತವಾಗಿ ಅನುಗತವಾಗಿ ತೋರುವ ಸಾಮ್ಯಾಂಶವನ್ನು ಪೂರ್ಣವಾಗಿ ಪ್ರಕಾಶಪಡಿಸುವ ಧರ್ಮವನ್ನು ಸಾಮಾನ್ಯ ಜಾತಿ ಆಕೃತಿ ಎಂಬ ಪದಗಳು ನಿರ್ದೇಶಿಸುತ್ತವೆ. ದ್ರವ್ಯ ಗುಣ ಮತ್ತು ಕರ್ಮವೆಂಬ ಪದಾರ್ಥಗಳಲ್ಲಿ ಜಾತಿ ಸಂತತವಾಗಿ ಅಡಗಿಕೊಂಡಿರುತ್ತದೆ. ಅದೇ ಪ್ರಕಾರ ವೈಷಮ್ಯ ಭಾವನೆಗೆ ಕಾರಣವಾದುದು ವಿಶೇಷ ಎನಿಸಿಕೊಳ್ಳುತ್ತದೆ. ಸರ್ವಪ್ರಕಾರದಿಂದಲೂ ಬೇರೆ ಎಂಬ ಭೇದ ಭಾವನೆಗೆ ಎಡೆಗೊಡದೆ ಒಂದೇ ಆಗಿರದ ವಸ್ತುಗಳಲ್ಲಿ ಪರಸ್ಪರ ಭಿನ್ನವೆಂಬ ಭಾವನೆಗೆ ಏಕಮಾತ್ರ ಲಕ್ಷಣ ವಿಶೇಷವೆನ್ನಿಸಿಕೊಳ್ಳುತ್ತದೆ. ಏಕತ್ವವನ್ನು ಗಮನಿಸಿ ಬಳಸುವ ಜಾತಿ ಪದಾರ್ಥ ಒಂದೇ ಒಂದು. ಅನೇಕತ್ವವನ್ನು ಗಮನಿಸಿ ಬಳಸುವ ವಿಶೇಷ ಪದಾರ್ಥ ವ್ಯಕ್ತಿಗಳ ಸಂಖ್ಯಾನುಗುಣವಾಗಿ, ಪ್ರತಿ ವ್ಯಕ್ತಿಯಲ್ಲಿಯೂ ತೋರಿ ಅನಂತವಾಗಿರುತ್ತದೆ. ಇವೆರಡು ಪದಾರ್ಥಗಳೂ ಎಂದೂ ಇದ್ದುಕೊಂಡು ನಿತ್ಯವಾದುವಾಗಿರುತ್ತವೆ.

	ಇದುವರೆಗೆ ಪ್ರಸ್ತಾಪ ಮಾಡಿದ ಪದಾರ್ಥಗಳ ಸ್ವರೂಪ ಸ್ವಭಾವ ಮತ್ತು ಪರಸ್ಪರ ಸಾಮ್ಯ ವೈಷಮ್ಯಗಳ ಪರಿಚಯ ತಕ್ಕಮಟ್ಟಿಗೆ ಏರ್ಪಟ್ಟಿತು. ಈಗ ಅವುಗಳ ಸಂಬಂಧವನ್ನು ಕುರಿತ ವಿಮರ್ಶೆ. ಯಾವ ಪದಾರ್ಥವೂ ತಾನಾಗಿಯೇ ಮತ್ತೊಂದು ವಸ್ತುವಿನ ಸಂಕರ್ಪವಿಲ್ಲದೆ ಕೇವಲ ನಿರ್ವನಿತವಾಗಿ ಇರಲಾರದು, ಇರುವುದು ಇಲ್ಲ. ಪದಾರ್ಥಗಳು ಸೇರಿಕೊಂಡ ಮಾತ್ರಕ್ಕೆ ಅವು ತಮ್ಮ ಮೂಲ ಸ್ವರೂಪ ಸ್ವಭಾವಗಳನ್ನು ಕಳೆದುಕೊಳ್ಳಲಾರವು. ವಿಶಿಷ್ಟದಲ್ಲಿ ವಿಲಕ್ಷಣ ವಿಶೇಷಗಳನ್ನು ಗಮನಿಸುವುದು ಅನಿವಾರ್ಯ. ವಿಶೇಷ ವಿಶೇಷಣಗಳಿಗೆ ಇರುವ ಸಂಬಂಧವನ್ನು ಸಾಮಾನ್ಯವಾಗಿ ದಾರ್ಶನಿಕರು ಸಮದಾಯ ಎನ್ನುತ್ತಾರೆ. ಆಶ್ರಯವನ್ನು ಬಯಸುವ ಅದನ್ನು ನೀಡುವ ಪದಾರ್ಥಗಳಿಗೆ ಈ ಸಂಬಂಧ ಏರ್ಪಡುತ್ತದೆ. ಸಂಬಂಧ ಏಕರೂಪವಾದುದರಿಂದ ಸಂಬಂಧ ಪದಾರ್ಥ ಒಂದೇ.

	ಸಂಬಂಧದ ಫಲವಾಗಿ ಯಾವ ವ್ಯಾವರ್ತಕ ಲಕ್ಷಣಕ್ಕೂ ಅವಕಾಶವೀಯದ ಏಕ ರೀತಿಯ ಪದಾರ್ಥಗಳಲ್ಲಿ ಪರಸ್ಪರ ಭಿನ್ನತೆಯನ್ನು ಪ್ರದರ್ಶಿಸುವ ವಿಶೇಷ ಸಹಿತವಾದ ವ್ಯವಹಾರಕ್ಕೆ ಉಪಯೋಗವಾಗುವಂತೆ ಅನೇಕ ಸಮಾನ ಪದಾರ್ಥಗಳಲ್ಲಿ ವ್ಯಾಪಿಸಿರುವ ಪೂರ್ಣಸಾಧಾರಣತೆಯ ರೂಪತಾಳಿದ ಜಾತಿಯನ್ನು ಬಿಡದಿರುವ, ಇಷ್ಟಾನಿಷ್ಟ ಪ್ರಾಪ್ತಿ ಪರಿಹಾರಗಳನ್ನು ಉಂಟುಮಾಡಿಕೊಡುವ ಕರ್ಮವನ್ನು ಬಳಸುವ, ಇಷ್ಟಾನಿಷ್ಟ ರೂಪವಾದ ಗುಣಗಳಿಗೆ ಆಶ್ರಯವಾದ ದ್ರವ್ಯವೆಂಬುದು ಪದಾರ್ಥಗಳಲ್ಲಿ ಅಗ್ರಸ್ಥಾನ ಪಡೆದಿರುತ್ತದೆ.
	ಅನುಭವದಲ್ಲಿ ಆಶ್ರಯ ನೀಡುವ ದ್ರವ್ಯವನ್ನು ಪದಾರ್ಥವೆಂದೂ ಆಶ್ರಯ ಪಡೆವ ಪದಾರ್ಥಗಳನ್ನು ಧರ್ಮ, ವಿಶೇಷಣ ಅಥವಾ ಪ್ರಕಾರ ಎಂದೂ ವ್ಯವಹರಿಸುವುದು ದರ್ಶನ ಸಂಚಾರಕ್ಕೆ ನಿಯತವಾದ ಅಡಿಗಲ್ಲು. ಈ ನಿಯಮಕ್ಕೆ ಅನುಗುಣವಾಗಿ ಅನುಭವ ಮತ್ತು ಸಂಸ್ಕಾರಗಳಿಗೆ ತಕ್ಕಂತೆ ತತ್ತ್ವ ಸಂಶೋಧನೆಗಳೂ ನಿರ್ಣಯಗಳೂ ಹುಟ್ಟಿಕೊಂಡಿವೆ.			(ವಿ.ಟಿ.ಟಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ